ನಾಯ್ಡು, ಸಿ ಎಸ್
1914 -  ಭಾರತೀಯ ಕ್ರಿಕೆಟ್ಟಿನ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿ ಮೆರೆದ ಅಪೂರ್ವ ಆಟಗಾರರು. 1914ರ ಎಪ್ರಿಲ್ 19ರಂದು ಜನ್ಮವೆತ್ತಿದ ಇವರು ಸುಮಾರು ಹತ್ತೊಂಬತ್ತು ವರ್ಷ ಒಂಬತ್ತು ತಿಂಗಳ ಎಳೆವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯದಲ್ಲಿ (1933-34) ಭಾರತವನ್ನು ಮೊದಲ ಬಾರಿಗೆ ಪ್ರತಿನಿಧಿಸಿ ಪಂದ್ಯದ ಅತ್ಯಂತ ಕಿರಿಯ ಆಟಗಾರರೆಂಬ ಕೀರ್ತಿಗೆ ಪಾತ್ರರಾದರು. ಅಲ್ಲಿಂದ ಮುಂದೆ ಎರಡು ದಶಕಗಳಿಗೂ ಮೀರಿದ ಸುದೀರ್ಘವಾದ ತಮ್ಮ ಕ್ರಿಕೆಟ್ ಜೀವನದಲ್ಲಿ ಇವರು ಪ್ರಥಮ ದಜೆಯ ರಣಜೀ ಟ್ರೋಫಿ ಪಂದ್ಯಗಳಲ್ಲಿ ಸರಾವರಿ 23.43 ರನ್‍ಗಳಿಗೆ ಒಂದರಂತೆ 295 ವಿಕೆಟ್ ಗಳಿಸಿದರು.

ಇದಲ್ಲದೆ ಅಧಿಕೃತವಾದ ಹನ್ನೊಂದು ಮತ್ತು ಅನಧಿಕೃತವಾದ ಹನ್ನೆರಡು ಟೆಸ್ಟ್ ಪಂದ್ಯಗಳಲ್ಲೂ ಪಾಲುಗೊಂಡರು. ಇದರ ಅಂಗವಾಗಿ ಇಂಗ್ಲೆಂಡಿಗೆ ಎರಡು ಬಾರಿ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾಗಳಿಗೆ ಒಂದೊಂದು ಬಾರಿ ಪ್ರವಾಸವನ್ನು ಕೈಗೊಂಡರು. ಆದರೆ ಅಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಇವರ ಆಟ ಹೇಳಿಕೊಳ್ಳುವಷ್ಟು ಪರಿಣಾಮಕಾರಿಯಾಗಲಿಲ್ಲ. ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ತಮ್ಮ ಅಭಿಜಾತ ಸತ್ವವನ್ನು ಪ್ರಭಾವಕಾರಿಯಾಗಿ ಮೆರೆದರು. ದ್ವಿತೀಯ ಮಹಾಯುದ್ದದ ಅನಂತರ ಜರುಗಿದ ಆಸ್ಟ್ರೇಲಿಯನ್ ಸರ್ವಿಸಸ್ ವಿರುದ್ದದ ಎಲ್ಲಾ ಪಂದ್ಯಗಳಲ್ಲಿಯೂ ಕಾಮನ್‍ವೆಲ್ತ್ ಟೀಮಿನ ವಿರುದ್ದದ ಮೊದಲೆರಡು ಪಂದ್ಯಗಳಲ್ಲೂ ಇವರು ತಮ್ಮ ಅದ್ಭುತ ರಮ್ಯ ಸ್ಪಿನ್ ಬೋಲಿಂಗ್, ದಿಟ್ಟತನದ ಬ್ಯಾಟಿಂಗ್ ಹಾಗೂ ಸೋಲರಿಯದ ಫೀಲ್ಡಿಂಗ್‍ಗಳ ಮೂಲಕ ತಮ್ಮ ಆಟಗಾರಿಕೆಯ ಉಚ್ಚತಮ ಮಟ್ಟವನ್ನು ಪ್ರದರ್ಶಸಿದರು.  ಸುಮಾರು ಐದು ವರ್ಷಗಳ ಆ ಅವಧಿಯಲ್ಲಿ ಇವರು ಭಾರತದ ಅತ್ಯುಚ್ಚ ಲೆಗ್ ಸ್ಪಿನ್ ಬೋಲರ್ ಎಂದು ಪರಿಗಣಿತರಾದರು.

ರಣಜೀ ಟ್ರೋಫಿ ಪಂದ್ಯಗಳಿಗೂ ನಾಯ್ಡು ಅವರಿಗೂ ಶಾಶ್ವತ ಸ್ವರೂಪದ ಸ್ಮರಣೀಯವೆಂಬಥ ಸಂಬಂಧವಿತ್ತು. ತಮ್ಮ ಹಿರಿಯಣ್ಣ ಸಿ.ಕೆ.ನಾಯ್ಡು ಅವರ ನಾಯಕತ್ವದಲ್ಲಿ ಮುಸ್ತಾಕ್ ಅಲಿ, ಎಂ. ಎಂ. ಲಗದಾಳೆ, ಎಚ್.ಜಿ.ಗಾಯಕ್‍ವಾಡ್ ರವರಂಥ ವಿಖ್ಯಾತ ಆಟಗಾರರೊಂದಿಗೆ ಪ್ರಮುಖ ಬೋಲರ್ ಆಗಿ ರಣಜೀ ಪಂದ್ಯಗಳಲ್ಲಿ ಆಡುವ ಸೌಭಾಗ್ಯ ಇವರದಾಗಿತ್ತು. 1944-45 ರಲ್ಲಿ ಅಂದಿನ ಸುವಿಖ್ಯಾತ ಹೋಳ್ಕರ್ ಟೀಮಿನ ಪರವಾಗಿ ಮುಂಬಯಿ ಟೀಮಿನ ವಿರುದ್ದ ಆಡಿದ ಪಂದ್ಯದಲ್ಲಿ ಇವರು ಅತ್ಯಧಿಕ ಸಂಖ್ಯೆಯ 152.5 ಓವರು ಅಥವಾ 917 ಸಲ ಬೋಲ್ ಮಾಡುವ ಮೂಲಕ ತಮ್ಮ ಬೋಲಿಂಗ್ ಸಾಮಥ್ರ್ಯಕ್ಕೆ ಒಂದು ದೊಡ್ಡ ದಾಖಲೆಯನ್ನೇ ಒದಗಿಸಿದರು. ಅದೇ ವರ್ಷದ ಕ್ರಿಕೆಟ್ ಋತುಮಾನವೊಂದರಲ್ಲಿಯೇ 33 ವಿಕೆಟ್ ಗಳಿಸಿದರು. ಅದೇಕೆ, ತಮ್ಮ ಕ್ರಿಕೆಟ್ ಜೀವನದ ಚೊಚ್ಚಿಲ ದೆಸೆಯೆನಿಸಿದ 1933 ರಲ್ಲಿಯೆ ಬರೋಡ ಟೀಮಿನ ಪರವಾಗಿ ಆಡಿದ ಪಂದ್ಯವೊಂದರ ಒಂದು ಇನ್ನಿಗ್ಸ್‍ನಲ್ಲಿ ನವನಗರ ಟೀಮಿನ ಎಂಟು ವಿಕೆಟ್ ಬಲಿತೆಗೆದುಕೊಂಡರು ಮಾತ್ರವಲ್ಲ, 1957 ರಲ್ಲಿ ತಾವು ಕ್ರಿಕೆಟ್ ಜೀವನದ ಅಂತಿಮ ಕಾಲದಲ್ಲಿ ಉತ್ತರಪ್ರದೇಶದ ಪರವಾಗಿ ಆಡಿದ ಆಟದಲ್ಲಿ ವಿದರ್ಭದ ಹದಿನಾಲ್ಕು ವಿಕೆಟ್ ಪಡೆಯುವ ಅಪೂರ್ವ ಸಿದ್ಧಿಯನ್ನು ಸಾಧಿಸಿದರು.

ಬ್ಯಾಟಿಂಗನಲ್ಲೂ ಇವರು ಗಮನಾರ್ಹರಾಗಿದ್ದರು. ದುಡುಕುತನದಿಂದ ಕೂಡಿದ ಹುಚ್ಚುಹೊಡೆತಗಳಿಗೂ ಇವರಿಗೂ ಎಣ್ಣೆ ಸೀಗೆಕಾಯಿಯ ಸಂಬಂಧವೆನ್ನಬಹುದು. ಏಕೆಂದರೆ ಎದುರಿಸುವ ಚೆಂಡನ್ನು ಇವರು ತೂಗಿ ನೋಡಿ ಅದಕ್ಕೆ ತಕ್ಕ ಹಾಗೆ ತಮ್ಮ ಬ್ಯಾಟನ್ನು ಬೀಸುತ್ತಿದ್ದರು. ಅನುಕೂಲವಾದ ಚೆಂಡಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದರು. ಸದವಕಾಶ ಒದಗಿ ಬಂದಾಗ ತಮ್ಮ ಶಕ್ತಿಸರ್ವಸ್ವದಿಂದ ಬಲವಾಗಿ ಬಾರಿಸದೆ ಬಿಡುತ್ತಿರಲಿಲ್ಲ. ಆದರೆ ಹಾಗೆ ಬಾರಿಸುವ ಇವರ ರೀತಿ ಅಷ್ಟೊಂದು ಆಕರ್ಷಿತವಾಗಿರದಿದ್ದರೂ ಸತ್ವಪೂರ್ಣವಾಗಿರುತ್ತಿತ್ತು. ತಮ್ಮ ಸುವಿಖ್ಯಾತ ಅಣ್ಣನ ಪ್ರಭಾವ ಮುದ್ರೆ ಅದರಲ್ಲಿ ಕಂಡುಬರುತ್ತಿತ್ತು.
ಬೋಲಿಂಗ್ ಬ್ಯಾಟಿಂಗ್‍ನಂತೆ ಫಿಲ್ಡಂಗ್‍ನಲ್ಲೂ ಇವರದು ಎತ್ತಿದ ಕೈ ಆಗಿತ್ತು. ಔಟ್‍ಫಿಲ್ಡ್ ರಕ್ಷಣೆಯಲ್ಲಿ ಇವರನ್ನು ಸರಿಗಟ್ಟುವವರು ವಿರಳವೆಂದೇ ಹೇಳಬಹುದು.

ಇಷ್ಟೆಲ್ಲಾ ಹೇಳಿದರೂ ಅಧಿಕೃತ ಟೆಸ್ಟುಗಳಲ್ಲಿ ಇವರು ಕನಿಷ್ಟ ಪಕ್ಷ ಬೋಲರ್ ಆಗಿಯಾದರೂ ಯಶಸ್ವಿಯಾಗಲಿಲ್ಲವೇಕೆಂಬುದು ಒಂದು ಒಡೆಯದ ಒಗಟೇ ಆಗಿದೆ. ಬಹುಶಃ ಅದಕ್ಕೆ ಕ್ರಿಕೆಟ್ ಆಟದ ಅನಿಶ್ಚಿತತೆಯೇ ಕಾರಣವಾದಂತಿದೆ. ಇವರ ಈ ವಿಫಲತೆ ತತ್ಕಾಲೀನ ಅಸಮಾಧಾನತೆಗೆ ಕಾರಣವಾಗಿರಬಹುದಾದರೂ ಭಾರತದ ಕ್ರಿಕೆಟ್ ಚರಿತ್ರೆಯಲ್ಲಿ ಇವರಿಗೆ ಸುಭದ್ರ ಸ್ಥಾನವಿದೆಯೆಂಬುದು ಮಾತ್ರ ಅಲ್ಲಗಳೆಯಲಾಗದ ಸತ್ಯ.

ಕ್ರಿಕೆಟ್ ಇವರ ಪಾಲಿಗೆ ತಾಪದಾಯಕವಾದ ತಪಸ್ಸಾಗಲೀ, ಸಹನೆಯ ಸತ್ವ ಪರೀಕ್ಷೆಯಾಗಲೀ ಆಗಿರಲಿಲ್ಲ.  ಆಟದ ಮೈದಾನದೊಳಗಿದ್ದಾಗಿನ ಒಂದೊಂದು ಕ್ಷಣವೂ ಇವರಿಗೆ ಖುಷಿ ಕೊಡುವಂಥದ್ದಾಗಿರುತ್ತಿತ್ತು.  ಬೋಲಿಂಗ್, ಬ್ಯಾಟಿಂಗ್ ಫಿಲ್ಡಿಂಗ್ ಈ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿಯೂ ಇವರದ್ದು ಎದೆಗಾರಿಕೆಯ ನಿಲುಮೆ, ಆಕ್ರಮಣಕಾರಿ ಆಟ. ಇವರ ಕ್ಷೇತ್ರರಕ್ಷಣೆಯಂತು ಪ್ರೇಕ್ಷಕರ ಪಾಲಿಗೆ ಹಬ್ಬವೇ ಆಗಿರುತ್ತಿತ್ತು.

ಒಟ್ಟಿನ ಮೇಲೆ ಇವರದು ಕ್ರಿಕೆಟ್ಟಿನ ದೃಷ್ಟಿಯಿಂದ ಸಾರ್ಥಕ ಸಾಧನೆಯ ಸಮರ್ಪಿತ ಜೀವನ. ಕ್ರಿಕೆಟ್ ಆಟವನ್ನು ಜನಪ್ರಿಯಗೊಳಿಸಿದ ಕೀರ್ತಿಗೂ ಇವರು ಹಕ್ಕುದಾರರು.	
(ಎಂ.ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ